-ಎಚ್. ಮಹೇಶ್
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕದೀರ್ ಸಿನಿಮಾ ಎಂದರೆ ಅಲ್ಲೊಂದು ರಿಯಾಲಿಸ್ಟಿಕ್ ಟಚ್ ಇರುತ್ತದೆ, ಸಿನಿಮಾ ನೋಡಿ ಬಂದ ನಂತರ ಏನೋ ಒಂಥರಾ ಮಿಸ್ಸಿಂಗ್ ಫೀಲಿಂಗ್ ಇರುತ್ತದೆ ಎಂಬುದು ಅವರ ಸಿನಿಮಾ ನೋಡಿರುವವರ ಅಭಿಪ್ರಾಯ. ಆದರೆ ನನ್ ಲವ್ ಟ್ರ್ಯಾಕ್ ಚಿತ್ರದಲ್ಲಿ ಆ ಎರಡೂ ಅಂಶಗಳನ್ನು ತೋರಿಸುವ ನಿರ್ದೇಶಕರ ಪ್ರಯತ್ನ ಪರಿಣಾಮಕಾರಿ ಆಗಿ ಮೂಡಿ ಬಂದಿಲ್ಲ. ಇಲ್ಲಿ ಲವ್ ಇದೆ, ಸಾವು ಇದೆ, ಟ್ರಾಜಿಡಿಯೂ ಇದೆ. ಈ ಮಿಶ್ರಣ ಮಾತ್ರ ಪ್ರೇಕ್ಷಕನಿಗೆ ಬೋರ್ ಹೊಡೆಸುತ್ತದೆ.
ನಾಯಕ ರಾಮ್ ( ರಕ್ಷಿತ್)ಗೆ ಒಬ್ಬ ಪ್ರಾಣದ ಗೆಳೆಯ ಇರುತ್ತಾನೆ. ಬಾಲ್ಯದಿಂದಲೂ ಅವರಿಬ್ಬರೂ ಪ್ರಾಣ ಸ್ನೇಹಿತರು. ಆ ಸ್ನೇಹಿತನಿಗೆ ಒಬ್ಬಳು ಚೆಂದದ ತಂಗಿ ( ನಿಧಿ ಕುಶಾಲಪ್ಪ). ತಾನು ಪ್ರೀತಿಸುತ್ತಿರುವ ಹುಡುಗಿ ಪ್ರಾಣ ಸ್ನೇಹಿತನ ತಂಗಿ ಎಂದು ನಾಯಕನಿಗೆ ಗೊತ್ತಾಗುತ್ತದೆ. ಆ ಕಾರಣಕ್ಕೆ ಇಬ್ಬರ ಸ್ನೇಹಿತರ ನಡುವೆ ಜಗಳವಾಗುತ್ತದೆ. ನಂತರ ಆ ಜಗಳ ಸುಖಾಂತ್ಯ ಕಾಣುತ್ತದೆ. ಓಟದ ಸ್ಪರ್ಧೆಯಲ್ಲಿ ನ್ಯಾಷನಲ್ ಚಾಂಪಿಯನ್‌ನಲ್ಲಿ ಭಾಗವಹಿಸಲು ಗೆಳೆಯನು (ವಸಿಷ್ಠ ) ಕಾರು ಪ್ರಯಾಣ ಮಾಡುವಾಗ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಮುಂದೆ ಏನಾಗುತ್ತದೆ ಎಂಬುದೇ ಚಿತ್ರದ ಸ್ಟೋರಿ.
ರಕ್ಷಿತ್ ಗೌಡ ಕಾಲೇಜ್ ಗೋಯಿಂಗ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಕಾಲೇಜ್ ಕ್ಯಾಂಪಸ್‌ನಲ್ಲಿ ತನ್ನ ಸ್ನೇಹಿತರಿಂದ ನಿಂದನೆಗೆ ಒಳಗಾಗುವ ದೃಶ್ಯಗಳಲ್ಲಿ ಚೆನ್ನಾಗಿ ನಟಿಸಿದ್ದಾರೆ. ಆದರೆ ನಿರ್ದೇಶಕರು, ನಾಯಕ ಹೆಚ್ಚು ನಿಂದನೆಗೆ ಒಳಗಾಗುವ ದೃಶ್ಯಗಳನ್ನು ಯಾಕೆ ತೋರಿಸಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ. ನಾಯಕ, ಹುಡುಗಿಯನ್ನು ಸಿಗ್ನಲ್‌ನಲ್ಲಿ ನೋಡಿ ಲವ್ ಮಾಡುವ ಸಾಮಾನ್ಯ ದೃಶ್ಯ ಈ ಚಿತ್ರದಲ್ಲೂ ಇದೆ. ನಿರ್ದೇಶಕರು ಏನು ಹೇಳಿದ್ದಾರೋ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ರಕ್ಷಿತ್. ಆದರೆ ನಿರ್ದೇಶಕರು ಇನ್ನಷ್ಟು ಹೊಸ ದೃಶ್ಯಗಳನ್ನು ಸೃಷ್ಟಿಸಬೇಕಿತ್ತು. ಚಿತ್ರದ ಕ್ಲೈಮ್ಯಾಕ್ಸ್ ನೋಡಲು ಪ್ರೇಕ್ಷಕ ಎರಡು ಗಂಟೆ ಕಾಯುವುದು ವ್ಯರ್ಥ ಅಲ್ಲ.
ರಕ್ಷಿತ್ ಗೌಡನ ಫ್ರೆಂಡ್ ಪಾತ್ರದಲ್ಲಿ ವಸಿಷ್ಠ ಸಿಂಹ ಅಭಿನಯ ಚೆನ್ನಾಗಿದೆ. ಅವರ ಧ್ವನಿಯಲ್ಲಿ ಸಖತ್ ಫೋರ್ಸ್ ಇದೆ. ನಿಧಿ ಕುಶಾಲಪ್ಪ. ಲಕ್ಷ್ಮಿ ರೈ ಥರ ಕಾಣಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತದೆ. ಚಿತ್ರ ತಾಂತ್ರಿಕವಾಗಿ ಸೊರಗಿದೆ. ನ್ಯಾಚುರಲ್ ಆಗಿರಬೇಕು ಎಂಬ ಕಾರಣಕ್ಕೆ ಏನೋ ಚಿತ್ರದಲ್ಲಿ ಲೈಟಿಂಗ್ ಕೊರತೆ ಎದ್ದು ಕಾಣುತ್ತದೆ. ಚಿತ್ರದಲ್ಲಿ ನಿಜಕ್ಕೂ ಕಾಡುವುದು ಹಿನ್ನೆಲೆ ಸಂಗೀತ. ಪ್ರತಿ ದೃಶ್ಯಕ್ಕೂ ಸಂಯೋಜಿಸಿರುವ ಹಿನ್ನೆಲೆ ಸಂಗೀತವನ್ನು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ಕದೀರ್ ರಿಯಾಲಿಸ್ಟಿಕ್ ಸಿನಿಮಾವನ್ನು ನೋಡುವಂತೆ , ಮೆಚ್ಚುವಂತೆ ಮಾಡಲು ವಿಫಲಗೊಂಡಿದ್ದಾರೆ.
ನನ್ ಲವ್ ಟ್ರ್ಯಾಕ್