Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಇಂದು ಜನರಿಗೆ ಜ್ಞಾನಕ್ಕಿಂತ ಅಜ್ಞಾನವೇ ಹಿತವಾಗಿದೆ

$
0
0

ಐಮಂಗಲ : ಪ್ರಸ್ತುತ ಜ್ಞಾನಕ್ಕಿಂತ ಅಜ್ಞಾನವೇ ಹಿತ ಎನ್ನುವಂತಾಗಿದೆ. ತಪ್ಪು ಮಾಡಿದರೂ ಯಾರೂ ಮಾತನಾಡುವುದಿಲ್ಲ, ಭ್ರಷ್ಟರಾದರೂ ಕೇಳುವುದಿಲ್ಲ, ಅಜ್ಞಾನವೇ ಪರಮ ಸುಖ ಎಂದು ಭಾವಿಸಿರುವ ಜನರ ಮಧ್ಯೆ ನಮಗೆ ನಿಜವಾದ ಜ್ಞಾನದ ಅರಿವಾಗಬೇಕು ಎಂದು ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಹೊರ ವಲಯದಲ್ಲಿರುವ ಮಹಾ ಶಿವಶರಣ ಹರಳಯ್ಯ ಗುರುಪೀಠದ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಜ್ಞಾನ ಬೆಳಕು ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ಎಲ್ಲರೂ ಶ್ರೀಮಂತರು ಎನಿಸಿಕೊಳ್ಳುತ್ತಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ಇರುವವರು ಶ್ರೀಮಂತರು ಎನಿಸಿಕೊಳ್ಳುತ್ತಿದ್ದರೂ ಜ್ಞಾನದ ಕೊರತೆ ಅವರಿಗಿದೆ. ನಿನ್ನೊಡವೆ ಎಂಬುದು ಜ್ಞಾನ ಎಂಬುದನ್ನು ಅನೇಕರು ಮರೆತಿದ್ದಾರೆ ಎಂದರು.

ಕಾಲ, ಕಾಸು, ಕಾಯಕ ಈ ಮೂರಕ್ಕೆ ಯಾರು ಮನ್ನಣೆ ನೀಡುತ್ತಾರೋ ಅವರು ಅದ್ಭುತ ವ್ಯಕ್ತಿಗಳಾಗುತ್ತಾರೆ. ಕಾಲದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು, ಕಾಸಿನ ಬೆಲೆ ಅರಿತು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಕಾಯಕದಲ್ಲಿ ಸದಾ ನಿರತರಾಗಿಬೇಕು ಎಂದರು.

ನಿವೃತ್ತ ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಮಾತನಾಡಿ, ಜ್ಞಾನ ಸಂಪತ್ತನ್ನು ಮರೆತು ಜಗತ್ತು ಇಂದು ವೇಗವಾಗಿ ಓಡುತ್ತಿದೆ. ಇಂದು ಜ್ಞಾನದ ಮೂಲಕ ಬೆಳಕನ್ನು, ಬೆಳಕಿನ ಮೂಲಕ ಜ್ಞಾನವನ್ನು ಪಡೆದು ನಾವು ಸದೃಢ ಸಮಾಜ ನಿರ್ಮಾಣ ಮಾಡಬೇಕು. ಬರಡು ನೆಲವನ್ನು ಹಸಿರನ್ನಾಗಿ ಮಾಡುವ ಕಾರ್ಯ ಭಕ್ತರದ್ದು, ಹೆಚ್ಚು ಹೆಚ್ಚು ಜ್ಞಾನಿಗಳಾದಂತೆ ನಾವು ಹೆಚ್ಚು ಬೆಳೆಯುತ್ತೇವೆ. ಸಮಾಜದ ಮುಖ್ಯವಾಹಿನಿಗೆ ಹರಳಯ್ಯನ ಭಕ್ತರು ಬರಬೇಕು ಎಂದರು.

ಹಿರಿಯ ಪತ್ರಕರ್ತ ಎಸ್‌. ನಾಗಣ್ಣ ಮಾತನಾಡಿ, ಮಾಧ್ಯಮಗಳ ಭರಾಟೆಯಿಂದ ಇಂದು ಅನೇಕ ಜನಪರ ಕಾರ್ಯಕ್ರಮ ಸ್ಥಗಿತವಾಗುತ್ತಿವೆ. ಜನರಿಗೆ ಮುಟ್ಟಿಸುವ ದೆಸೆಯಲ್ಲಿ ಅನೇಕ ತಪ್ಪುಗಳು ಆಗುತ್ತಿವೆ. ಮಾಧ್ಯಮಗಳಲ್ಲಿ ಜ್ಞಾನಕ್ಕಿಂತ ಪರಿಜ್ಞಾನ ಮುಖ್ಯ ಎನ್ನುವಂತಾಗಿದೆ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣ ಮೂರ್ತಿ ಮಾತನಾಡಿ, ಯಾವುದೇ ಕಾರ್ಯಗಳು ಯಶಸ್ವಿಯಾಗಬೇಕಾದರೆ ಶ್ರಮ ಅಗತ್ಯ. ಮಠದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಈ ಮೂಲಕ ಜ್ಞಾನದ ಬೆಳಕು ಮೂಡುತ್ತದೆ ಎಂದರು.

ಶ್ರೀಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಬದುಕು ಇಂದು ಬಹಳ ದುಸ್ತರವಾಗಿದೆ. ಯಾವುದೇ ಕೆಲಸದಲ್ಲಿ ನಾವು ನಿಲ್ಲಬೇಕಾದರೆ ಛಲ ಬಹಳ ಮುಖ್ಯ. ನಾವು ಇಲ್ಲಿ ಮಠ ಕಟ್ಟುವಾಗ ಅನೇಕ ಅಡೆತಡೆ ಇದ್ದರೂ ನಮಗೆ ಭಕ್ತರೇ ಶಕ್ತಿ. ಈ ಮೂಲಕ ಮಠದ ಆವರಣದಲ್ಲಿ ಪ್ರತಿ ತಿಂಗಳು ಜ್ಞಾನದ ಬೆಳಕು ಕಾರ್ಯಕ್ರಮ ನಡೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ಕೊರಟಗೆರೆ ಹನುಮಂತಪುರ ಲಕ್ಷ್ಮೀಶ್ವರ ಮಠದ ನಾಗೇಂದ್ರನಾಥ ಸ್ವಾಮೀಜಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾದ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಎಪಿಎಂಸಿ ಉಪಾಧ್ಯಕ್ಷ ಬಿ.ಟಿ.ಶಾಂತಣ್ಣ, ಸತೀಶ್‌, ಸಿದ್ದಪ್ಪ, ಎಂ.ಡಿ.ಕೋಟೆ ಸಿದ್ದೇಶ್‌, ಕಲ್ಲಹಟ್ಟಿ ನವೀನ್‌, ಕಲ್ಲಹಟ್ಟಿ ರವಿ, ಚಂದ್ರು, ವೃಷಬೇಂದ್ರ, ರಾಘವೇಂದ್ರ, ದೇವೇಂದ್ರ, ಹನುಮಂತಪ್ಪ ಭಾಗವಹಿಸಿದ್ದರು. ತಿಪ್ಪೇಸ್ವಾಮಿ ಸ್ವಾಗತಿಸಿ ನಿರೂಪಿಸಿದರು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>