ಮಹಿಳಾ ಪ್ರಧಾನ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಮೊನ್ನೆಯಷ್ಟೇ ಸುದ್ದಿಯಾದವರು ಶ್ವೇತಾ ಶ್ರೀವಾತ್ಸವ್. ಕಿರಗೂರಿನ ಗಯ್ಯಾಳಿಗಳು ಚಿತ್ರದ ನಂತರ ಅವರು ಮತ್ತ್ಯಾವ ಪಾತ್ರದಲ್ಲಿ ಕಾಣ ಸಿಕೊಳ್ಳಬಹುದು ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿತ್ತು. ಅಲ್ಲದೇ ನಿರ್ದೇಶನಕ್ಕಿಳಿಯುವ ಅವರ ಕನಸು ಎಲ್ಲಿಗೆ ಬಂತ ಅನ್ನುವ ಕುತೂಹಲ ಕೂಡ ಅಭಿಮಾನಿಗಳದ್ದಾಗಿತ್ತು. ಎಲ್ಲದಕ್ಕೂ ಉತ್ತರ ನೀಡಿದ್ದಾರೆ ಶ್ವೇತಾ. * ಮಹಿಳಾ ಪ್ರಧಾನ ಚಿತ್ರದ ಶೂಟಿಂಗ್ ಎಲ್ಲಿಗೆ ಬಂತು? ಸಿನಿಮಾ ತಂಡವು ಶೂಟಿಂಗ್ ಸಿದ್ಧತೆಯಲ್ಲಿದೆ. ಅಕ್ಟೋಬರ್ ಎರಡನೇ ವಾರದಿಂದ ನನ್ನ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರತಿಭಾವಂತರ ಟೀಮ್ ಅದಾಗಿದ್ದರಿಂದ, ಚಿತ್ರೀಕರಣವನ್ನೂ ವಿಭಿನ್ನವಾಗಿಯೇ ಪ್ಲಾನ್ ಮಾಡಿದ್ದಾರೆ. * ನಾಯಕಿ ಪ್ರಧಾನ ಚಿತ್ರವೆಂದರೆ, ಯಾವ ರೀತಿಯ ಪಾತ್ರವದು? ಈ ಸಿನಿಮಾದಲ್ಲಿ ನನ್ನದು ಹಿರೋಯಿನ್ ಪಾತ್ರ. ಅಂದರೆ ನಾನು ಆ ಚಿತ್ರದ ಕತೆಯಲ್ಲಿ ನಾಯಕಿಯೇ ಆಗಿರುತ್ತೇನೆ. ಆ ನಟಿಯ ಸುತ್ತ ನಡೆಯುವ ಕತೆ ಅಲ್ಲಿದೆ. * ಹೀರೋಯಿನ್ ಬದುಕಿನ ಕತೆ ಅಂದರೆ ಆ ನಾಯಕಿ ಯಾರಾಗಿರುತ್ತಾರೆ? ಇದು ಯಾರದೋ ನಿಜ ಜೀವನದ ಸಿನಿಮಾವಲ್ಲ. ಬಾಳಿ ಬದುಕಿದ್ದ ಹಿರೋಯಿನ್ ಜೀವನವನ್ನೂ ಹೇಳೋಕೆ ಹೊರಟಿಲ್ಲ. ಅನೇಕ ನಟಿಯರ ಜೀವನದಲ್ಲಿ ನಡೆಯಬಹುದಾದಂತಹ ಘಟನೆಗಳು ಚಿತ್ರಕತೆಯಲ್ಲಿವೆ. * ಪಾತ್ರಕ್ಕಾಗಿ ಏನೆಲ್ಲ ತಯಾರಿಯನ್ನು ಮಾಡಿಕೊಂಡಿದ್ದೀರಿ? ನಿಜ ಹೇಳುತ್ತೇನೆ. ಈ ಹಿಂದಿನ ಯಾವ ಪಾತ್ರಕ್ಕಾಗಿಯೂ ನಾನು ಸಿದ್ಧತೆ ಮಾಡಿಕೊಂಡಿಲ್ಲ. ಕಿರಗೂರಿನಲ್ಲಿ ನನ್ನದು ಹಳ್ಳಿಯ ಹೆಂಗಸಿನ ಪಾತ್ರವಾಗಿದ್ದರೂ, ಅದಕ್ಕಾಗಿ ತಾಲೀಮು ಮಾಡಿಲ್ಲ. ಪಾತ್ರವನ್ನು ಅರ್ಥ ಮಾಡಿಕೊಂಡು ನಟಿಸಿದ್ದೇನೆ. ಹೀಗಾಗಿ ಈ ಸಿನಿಮಾದಲ್ಲೂ ಪ್ರಿಪರೇಷನ್ ಅಂತೇನೂ ಇಲ್ಲ. ಕಾಸ್ಟ್ಯೂಮ್ ಮತ್ತು ಮ್ಯಾನರಿಸಂನಲ್ಲಿ ಬದಲಾವಣೆ ಕಾಣಬಹುದು. * ಈ ನಾಯಕಿ ಗ್ಲಾಮರೆಸ್ ಆಗಿರುತ್ತಾಳಾ? ಇಲ್ಲಿ ನಾನು ಗ್ಲಾಮರೆಸ್ ಹಿರೋಯಿನ್ ಪಾತ್ರ ನಿರ್ವಹಿಸುತ್ತಿಲ್ಲ. 90ರ ದಶಕದ ನಾಯಕಿ ಆಕೆ. ಆ ವೇಳೆಯಲ್ಲಿ ನಾಯಕಿಯರು ಝೀರೋ ಸೈಜ್‌ನಲ್ಲಿ ಇರಲಿಲ್ಲ. ಆ ಟ್ರೆಂಡ್ ಶುರುವಾಗಿದ್ದು ಈಗ. ಹಾಗಾಗಿ ಪಾತ್ರಕ್ಕೆ ಏನು ಅಗತ್ಯವಿದೆಯೋ ಅದನ್ನಷ್ಟೇ ಮಾಡುವೆ. * ಸಿನಿಮಾದ ನಾಯಕ ಯಾರು? ಚಿತ್ರದ ವಿಶೇಷತೆ ಏನು? ತಿಲಕ್ ನಾಯಕ. ಅವರದ್ದೂ ಇಲ್ಲಿ ವಿಶೇಷ ಪಾತ್ರವಿದೆ. ಈವರೆಗೂ ಅವರು ಅಂತಹ ಪಾತ್ರ ಮಾಡಿಲ್ಲ ಅನಿಸತ್ತೆ. ಸ್ಯಾಮುವಲ್ ಟೋನಿ ನಿರ್ದೇಶಕರು. ಒಳ್ಳೆಯ ನಿರ್ದೇಶಕ ಅವರು. ಈ ಹಿಂದೆ ಅವರು ಒಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಚಿತ್ರ. * ಕಿರಗೂರಿನ ಗಯ್ಯಾಳಿಗಳು ಚಿತ್ರದ ನಂತರ ಅದೇ ರೀತಿಯ ಪಾತ್ರ ಹುಡುಕಿಕೊಂಡು ಬಂದಿರಬೇಕು ಅಲ್ಲವಾ? ಅದು ಸಹಜ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ರಿಲೀಸ್ ನಂತರವೂ ಅದೇ ರೀತಿಯ ಪಾತ್ರವನ್ನು ಕೇಳಿಕೊಂಡು ಬಂದರು. ನಾನು ಒಪ್ಪಲಿಲ್ಲ. ಕಿರಗೂರಿನ ನಂತರ ತುಂಬಾನೇ ಆಫರ್ಸ್ ಬಂದವು. ನಾನಾ ಕಾರಣಗಳಿಂದಾಗಿ ನಾನು ಒಪ್ಪಿಕೊಂಡಿಲ್ಲ. ವರ್ಷಕ್ಕೊಂದು ಸಿನಿಮಾ ಮಾಡಿದರೂ, ಅದು ಡಿಫರೆಂಟ್ ಆಗಿರಬೇಕು ಅನ್ನುವ ಮನಸ್ಥಿತಿ ನನ್ನದು. ಹೀಗಾಗಿ ಅವಸರವೇನೂ ಇಲ್ಲ. * ಡೈರೆಕ್ಷ ನ್ ಮಾಡಬೇಕು ಅನ್ನುವ ನಿಮ್ಮ ಕನಸು ಎಲ್ಲಿಗೆ ಬಂತು? ಒಂದು ಸಿನಿಮಾ ಮುಗಿದಾದ ನಂತರ, ನನ್ನ ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳಬೇಕು ಅಂತ ತೀರ್ಮಾನಿಸುತ್ತೇನೆ. ಆ ಟೈಮ್‌ನಲ್ಲಿ ಹೊಸ ರೀತಿಯ ಪಾತ್ರವೊಂದು ಬಂದು ನನ್ನ ಮುಂದೆ ನಿಲ್ಲುತ್ತದೆ. ಆ ಪಾತ್ರಕ್ಕಾಗಿ ನಿರ್ದೇಶನ ಮುಂದೂಡುತ್ತೇನೆ. ಎಲ್ಲದಕ್ಕೂ ಕಾಲ ಪಕ್ವವಾಗಬೇಕು. ಕಂಡಿತಾ ಆದಷ್ಟು ಬೇಗನೇ ನಿರ್ದೇಶನದ ಸುದ್ದಿಯನ್ನು ಕೊಡುತ್ತೇನೆ.
↧
ನಿರ್ದೇಶನಕ್ಕೆ ಇನ್ನೂ ಟೈಮಿದೆ: ಶ್ವೇತಾ
↧