* ಆದಾಯ ತೆರಿಗೆ ಇಲಾಖೆಯ ಕಾರ್ಯಚರಣೆ * ಕಪ್ಪುಹಣ ಘೋಷಣೆ ಯೋಜನೆ ಯಶಸ್ಸಿಗೆ ಕಸರತ್ತು ಮುಂಬಯಿ: ಆದಾಯ ತೆರಿಗೆ ಇಲಾಖೆಯು ಕಪ್ಪು ಹಣ ಘೋಷಣೆಗೆ ಜಾರಿಗೊಳಿಸಿರುವ ವಿಶೇಷ ಯೋಜನೆಯ ಗಡುವು ಮುಕ್ತಾಯಕ್ಕೆ 10 ದಿನ ಬಾಕಿ ಇರುವಂತೆಯೇ, ಯೋಜನೆಯನ್ನು ಯಶಸ್ವಿಗೊಳಿಸಲು ಕಸರತ್ತು ನಡೆಸುತ್ತಿದೆ. ಇದರ ಪರಿಣಾಮ ದೇಶದ ನಾನಾ ನಗರಗಳಲ್ಲಿ ರಸ್ತೆ ಬದಿಯಲ್ಲಿನ ದೋಸೆ, ವಡಾಪಾವ್ ಮುಂತಾದವುಗಳನ್ನು ಮಾರುವ ಸಣ್ಣ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಮುಂಬಯಿನಲ್ಲಿ 50ಕ್ಕೂ ಹೆಚ್ಚು ವಡಾ ಪಾವ್ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಘಾಟ್ಕೋಪರ್‌ನಲ್ಲಿ ದೋಸೆ ಸೆಂಟರ್ ಗುರಿಯಾಗಿದೆ. ಅಹಮದಾಬಾದ್, ಹೊಸದಿಲ್ಲಿ, ಕೋಲ್ಕೊತಾದಲ್ಲೂ ಸುಮಾರು 100 ಕಡೆಗಳಲ್ಲಿ ಸಮೀಕ್ಷೆ, ದಾಳಿಗಳು ನಡೆದಿವೆ. ಕಳೆದ 6 ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಯು ಸಮೀಕ್ಷೆಗಳನ್ನು ನಡೆಸಿತ್ತು. ಇದರ ಪ್ರಕಾರ ಸುಮಾರು 1 ಲಕ್ಷ ಮಂದಿ ಸಣ್ಣ ವ್ಯಾಪಾರಿಗಳು ಮತ್ತು ವರ್ತಕರು ತೆರಿಗೆ ತಪ್ಪಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದೊಂದು ವಾರದಿಂದ ಸಮೀಕ್ಷೆ ತೀವ್ರಗತಿಯಲ್ಲಿ ಸಾಗಿದೆ. '' ನನ್ನ ಕಳೆದ 25 ವರ್ಷಗಳ ಅನುಭವದಲ್ಲಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ, ದಾಳಿಗಳನ್ನು ಕಂಡಿಲ್ಲ. ಇದುವರೆಗೆ ತೆರಿಗೆ ಅಧಿಕಾರಿಗಳನ್ನು ಕಂಡೂ ಇಲ್ಲದ ವ್ಯಾಪಾರಿಗಳಿಗೆ ಅಚ್ಚರಿಯಾಗಿತ್ತು'' ಎನ್ನುತ್ತಾರೆ ಲೆಕ್ಕ ಪರಿಶೋಧಕರೊಬ್ಬರು. ಸೆಪ್ಟೆಂಬರ್ 30ರೊಳಗೆ ಇಂಥ 1000 ಸಣ್ಣ ದಾಳಿಗಳು ನಡೆಯುವ ನಿರೀಕ್ಷೆ ಇದೆ.
↧
ರಸ್ತೆ ಬದಿ ದೋಸೆ, ವಡಾಪಾವ್ ಅಂಗಡಿಗಳ ಮೇಲೆ ಐಟಿ ದಾಳಿ
↧