ವಿಜಯ ಕೋಟ್ಯಾನ್ ಪಡು ಮಂಗಳೂರು ಎಲ್‌ಪಿಜಿ ಗ್ಯಾಸ್‌ನ ಸಬ್ಸಿಡಿ ತ್ಯಾಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗಿವ್ ಇಟ್ ಅಪ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸಬ್ಸಿಡಿ ತ್ಯಾಗ ಮಾಡಿದ ಜಿಲ್ಲೆಗಳಲ್ಲಿ ಬೆಂಗಳೂರು ನಗರ 2ಲಕ್ಷಕ್ಕೂ ಅಧಿಕ ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ. ದೇಶಾದ್ಯಂತ ಈಗಾಗಲೇ 1 ಕೋಟಿಗೂ ಅಧಿಕ ಮಂದಿ ಸಬ್ಸಿಡಿ ತ್ಯಾಗ ಮಾಡಿದ್ದು , ಮಹಾರಾಷ್ಟ್ರ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 10ಲಕ್ಷ ರೂ.ಗಿಂತ ಹೆಚ್ಚು ಆದಾಯವಿರುವವರ ಸಬ್ಸಿಡಿ ತ್ಯಾಗಕ್ಕೆ ಈಗಾಗಲೇ ಕೇಂದ್ರದ ಇಂಧನ ಸಚಿವಾಲಯ ಈ ಹಿಂದೆ ಅಧಿಕೃತ ಸೂಚನೆ ನೀಡಿತ್ತು. ಪ್ರಾರಂಭಿಕ ಹಂತವಾಗಿ ತೈಲ ಕಂಪನಿಗಳ ಉನ್ನತಮಟ್ಟದ ಅಧಿಕಾರಿಗಳು, ಸಿಬ್ಬಂದಿ ಸಬ್ಸಿಡಿ ತ್ಯಾಗ ಮಾಡುವ ಮೂಲಕ ಮಾದರಿಯಾದರು. ಬಳಿಕ ನಾನಾ ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ಖಾಸಗಿ ವಲಯ, ಶಿಕ್ಷಣ ಸಂಸ್ಥೆ, ಐಟಿ ವಲಯ ಇದಕ್ಕೆ ಸಾಥ್ ನೀಡಿದ್ದವು. ಬೊಕ್ಕಸಕ್ಕೆ 4667 ಕೋಟಿ ಲಾಭ ಇದೀಗ ದೇಶಾದ್ಯಂತ 1,02,25,447 ಕೋಟಿ ಮಂದಿ ಸಬ್ಸಿಡಿ ತ್ಯಾಗ ಮಾಡಿದ್ದು, ದೇಶದ ಬೊಕ್ಕಸಕ್ಕೆ 4,667ಕೋಟಿ ರೂ.ಗೂ ಅಧಿಕ ಲಾಭವಾಗಿದೆ. ಇದರಲ್ಲಿ ಭಾರತ್ ಗ್ಯಾಸ್‌ನ 30,49,764, ಎಚ್‌ಪಿ ಗ್ಯಾಸ್‌ನ 28,38,220 ಇಂಡೇನ್ ಗ್ಯಾಸ್‌ನ 43,37,553ಮಂದಿ ಗ್ರಾಹಕರಿದ್ದು, ದೇಶ ಕಟ್ಟುವ ಕಾಯಕದಲ್ಲಿ ಪ್ರಧಾನಿಯೊಂದಿಗೆ ಕೈಜೋಡಿಸಿದ್ದಾರೆ. ಬಡವನ ಮನೆಯಲ್ಲಿ ಬೆಳಕು: ಗಿವ್‌ಇಟ್ ಅಪ್ ಯೋಜನೆಯಲ್ಲಿ ಆರ್ಥಿಕವಾಗಿ ಬಲಾಢ್ಯರಿರುವ ಕುಟುಂಬದಿಂದ 5ಕೋಟಿ ಸಬ್ಸಿಡಿ ತ್ಯಾಗ ಮಾಡುವ ಮೂಲಕ ಪಡೆಯುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ. ಇದರಲ್ಲಿ ಈಗಾಗಲೇ 1 ಕೋಟಿ ದಾಟಿದ್ದು, ಮೊದಲ ಹಂತದ ಯಶಸ್ಸು ಸಿಕ್ಕಿದೆ. ಈ ಸಬ್ಸಿಡಿಯನ್ನು ದೇಶದಲ್ಲಿರುವ ಕೋಟ್ಯಂತರ ಬಿಪಿಎಲ್ ಪಡಿತರ ಮೂಲಕ ಬಡವರಿಗೆ ನೀಡಿ ಆರೋಗ್ಯ ಜೀವನ ಮತ್ತು ಆರೋಗ್ಯ ಪರಿಸರಕ್ಕೆ ಉತ್ತೇಜನ ನೀಡಬಹುದು. ಪರಿಸರಕ್ಕೆ ಮಾರಕವಾದ ವಾಯುಮಾಲಿನ್ಯ ತಡೆಯಬಹುದಲ್ಲದೆ, ಮರದ ಕಟ್ಟಿಗೆ, ಸೀಮೆಎಣ್ಣೆ ಬಳಕೆ ಕಡಿಮೆಗೊಳಿಸಬಹುದಾಗಿದೆ.
↧
ಗಿವ್ ಇಟ್ ಅಪ್ ಎಲ್‌ಪಿಜಿ : ರಾಜ್ಯಕ್ಕೆ ನಾಲ್ಕನೇ ಸ್ಥಾನ
↧