ಗಿಲಾನಿಗೆ ಪೊಲೀಸ್ ಕಸ್ಟಡಿ
ದೇಶದ್ರೋಹದ ಆರೋಪದಡಿ ಬಂಧಿತರಾಗಿರುವ ದಿಲ್ಲಿ ವಿವಿ ಮಾಜಿ ಪ್ರೊಫೆಸರ್ ಗಿಲಾನಿ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯ ಗಿಲಾನಿಯನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ವಿದೇಶಿ ವಿವಿಗಳ ಬೆಂಬಲ
ವಿಶ್ವದ ಹಲವು ವಿವಿಗಳು ಜೆಎನ್‌ಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿವೆ. ಕೊಲಂಬಿಯಾ, ಯಾಲೆ, ಹಾರ್ವರ್ಡ್, ಕೇಂಬ್ರಿಡ್ಜ್ , ಆಕ್ಸಪರ್ಡ್, ಎಸ್‌ಒಎಎಸ್, ಯುನಿವರ್ಸಿಟಿ ಆಫ್ ಟೊರಾಂಟೋ, ಮ್ಯಾಕ್ ಗಿಲ್ ಸೇರಿದಂತೆ ಜಾಗತಿಕ ವಿಶ್ವವಿದ್ಯಾಲಯಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಎನ್‌ಯು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ದಿಲ್ಲಿ ಹೈಕೋರ್ಟ್ ನಕಾರ: ಇನ್ನು, ಜೆಎನ್‌ಯು ವಿವಾದಿತ ದೇಶದ್ರೋಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ತನಿಖೆ ನಡೆಸುವಂತೆ ವಕೀಲ ಹರಿಶಂಕರ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ. ಘಟನೆ ಸಂಬಂಧ ಪೊಲೀಸ್ ತನಿಖೆ ನಡೆದಿರುವಾಗ ಮಧ್ಯೆ ಪ್ರವೇಶಿಸುವುದು ಸರಿಯಲ್ಲಎಂದು ಹೈಕೋರ್ಟ್ ತಿಳಿಸಿದೆ.
ಪತ್ರಕರ್ತರ ಪ್ರತಿಭಟನೆ
ಪಟಿಯಾಲ ಹೌಸ್ ಕೋರ್ಟ್ ಅವರಣದಲ್ಲಿ ನಡೆದ ಹಲ್ಲೆ ಸಂಬಂಧ 100ಕ್ಕೂ ಹೆಚ್ಚು ಪತ್ರಕರ್ತರು ಪ್ರತಿಭಟನೆ ನಡೆಸಿದರು. ರಾಜಧಾನಿಯ ಪ್ರೆಸ್‌ಕ್ಲಬ್ ನಿಂದ ಸುಪ್ರೀಂಕೋರ್ಟ್ ವರೆಗೂ ಮೆರವಣಿಗೆ ನಡೆಸಿದ ಪತ್ರಕರ್ತರು,ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಮನವಿ ಸಲ್ಲಿಸಿದರು.
ಎನ್‌ಬಿಎ ಖಂಡನೆ: ಪಟಿಯಾಲ ನ್ಯಾಯಾಲಯದಲ್ಲಿ ಪತ್ರಕರ್ತರು, ಕ್ಯಾಮರಾಮನ್‌ಗಳ ಮೇಲೆ ನಡೆದ ದಾಳಿಯನ್ನು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಖಂಡಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಎನ್‌ಬಿಎ ಅಧ್ಯಕ್ಷ ರಜತ್ ಶರ್ಮಾ, ಕಾರ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಯತ್ನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ: ಪಟಿಯಾಲ ಕೋರ್ಟ್ ಆವರಣದಲ್ಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಡಿ. ಜೈ ಪ್ರಕಾಶ ಎನ್ನುವವರು ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹಿರಿಯ ವಕೀಲ ಇಂದಿರಾ ಜೈ ಸಿಂಗ್ ನ್ಯಾಯಾಲಯದ ಆವರಣದಲ್ಲಿ ಭದ್ರತಾ ಲೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಿಯಮಗಳನ್ನು ಬಿಗಿಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ವಿವಿ ಕೇಂದ್ರ ಗ್ರಂಥಾಲಯದ ವೆಬ್‌ಸೈಟ್ ಹ್ಯಾಕ್: ಈ ನಡುವೆ ವಿವಿ ಕೇಂದ್ರ ಗ್ರಂಥಾಲಯದ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಆದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಪವೃತ್ತರಾದ ವಿವಿ ಐಟಿ ಸಿಬ್ಬಂದಿ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.
ಹೊಸದಿಲ್ಲಿ: ಜೆಎನ್‌ಯು ವಿವಾದ ದಿನಗಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಜೆಎನ್‌ಯು ಉಪನ್ಯಾಸಕರು ಬೆಂಬಲ ನೀಡಿದ್ದು, ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪಾಠ ಮಾಡುತ್ತಿರುವುದು ಹೊಸ ಬೆಳವಣಿಗೆ.