Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸರಕಾರ ನಿರ್ಧಾರ

$
0
0

ಬೆಂಗಳೂರು: ಸಹಕಾರಿ ಸಂಸ್ಥೆಗಳು ರೈತರಿಗೆ ನೀಡಿರುವ ಶೂನ್ಯ ಬಡ್ಡಿ ಸಾಲದ ಮರುಪಾವತಿ ಅವಧಿಯನ್ನು ಎರಡು ತಿಂಗಳ ಕಾಲ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ, ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

'ಬೆಳೆ ಸಾಲ ಈಗ ಶೂಲ' ಶೀರ್ಷಿಕೆಯಡಿ 'ವಿಕ'ದಲ್ಲಿ ಭಾನುವಾರ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರನ್ನು ಮಾತನಾಡಿಸಿದಾಗ ಬೆಳೆ ಸಾಲ ಮರುಪಾವತಿ ಗಡುವು ವಿಸ್ತರಿಸಲು ತೀರ್ಮಾನ ಕೈಗೊಂಡಿದ್ದನ್ನು ಖಚಿತಪಡಿಸಿದರು.

ಸರಕಾರದ ಮಟ್ಟದಲ್ಲಿ ಕೈಗೊಳ್ಳುವ ನೀತಿ, ನಿರ್ಧಾರಗಳಿಗೆ ಅಧಿಕೃತ ಆದೇಶದ ಸ್ವರೂಪ ಸಿಕ್ಕರೆ ಮಾತ್ರ ಅದು ಜಾರಿಗೆ ಬರುತ್ತದೆ. ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಿಸುವ ವಿಚಾರದಲ್ಲಿ ತೀರ್ಮಾನ ಕೈಗೊಂಡಿದ್ದು ಹೌದಾದರೂ ಆದೇಶವಾಗಿಲ್ಲ. ಹಾಗಾಗಿ ರೈತರು ಆತಂಕಪಡುವಂತಾಗಿದೆ.

ಈ ಸಂಬಂಧ ಇನ್ನೂ ಆದೇಶ ಹೊರಡಿಸಿಲ್ಲವೆಂದು ಸಹಕಾರ ಇಲಾಖೆಯ ಉನ್ನತ ಮೂಲಗಳೇ ಪತ್ರಿಕೆಗೆ ತಿಳಿಸಿವೆ. ಅಲ್ಲದೆ, ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ಬಗ್ಗೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಲಿದೆ. ಇದಕ್ಕೆ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದೂ ಬಾಕಿಯಿದೆ. ಬಳಿಕ ಆದೇಶ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.

ಬೆಳೆ ಸಾಲ ಮರುಪಾವತಿ ಗಡುವು ವಿಸ್ತರಣೆ ಹೀಗೆ ಬಾಯಿಮಾತಿನಲ್ಲೇ ಇರುವುದರಿಂದ ಡಿಸಿಸಿ ಬ್ಯಾಂಕ್‌ಗಳೂ ಈ ಕುರಿತು ತಲೆಕೆಡಿಸಿಕೊಂಡಿಲ್ಲ. ರೈತರಿಗೂ ಬ್ಯಾಂಕ್‌ಗಳಿಂದ ಈ ಸಂಬಂಧ ಭರವಸೆ ಸಿಕ್ಕಿಲ್ಲ. ಹಾಗಾಗಿ ರೈತರು ಕಂಗಾಲಾಗುವಂತಾಗಿದೆ.

ಈ ಮಧ್ಯೆ 'ಗರಿಷ್ಠ ಮುಖಬೆಲೆಯ ನೋಟು ರದ್ದು ತೀರ್ಮಾನದ ಬೆನ್ನಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮರುಪಾವತಿ ಅವಧಿಯನ್ನು ಕೇಂದ್ರ ಸರಕಾರ ವಿಸ್ತರಿಸಿದೆ. ಹಾಗಾಗಿ ರಾಜ್ಯ ಸರಕಾರವೂ ಈ ತೀರ್ಮಾನ ಕೈಗೊಂಡಿದೆ. ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳಲ್ಲಿ ಮರುಪಾವತಿ ಮಾಡಬೇಕಿದ್ದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ,' ಎಂದು ಸಚಿವ ಮಹದೇವಪ್ರಸಾದ್‌ ಹೇಳಿದರು.

'ನೋಟು ರದ್ದು ತೀರ್ಮಾನವಾಗುತ್ತಿದ್ದಂತೆ ನವೆಂಬರ್‌ 14ರಿಂದ ಸಹಕಾರಿ ಬ್ಯಾಂಕ್‌ ವ್ಯವಹಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಸಾಲ ಮರುಪಾವತಿ ಹಾಗೂ ಹೊಸ ಸಾಲ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳ ವರೆಗಿನ ಸಾಲದ ಬಾಕಿ ಮರುಪಾವತಿ ಅವಧಿಯನ್ನು 60 ದಿನಗಳಿಗೆ ವಿಸ್ತರಿಸಲಾಗಿದೆ,' ಎಂದು ಸಚಿವರು ಸ್ಪಷ್ಟ ಪಡಿಸಿದರು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>