ಗಡಿ ಗ್ರಾಮಗಳ ಜನರ ಸ್ಥಳಾಂತರ | ಗುಪ್ತಚರ ಇಲಾಖೆ ಮಾಹಿತಿ ರಾಜನಾಥ್ ಪರಿಶೀಲನೆ:
ಹೊಸದಿಲ್ಲಿ: ಪಾಕ್ ಆಕ್ರಮಿತ ಕಾಶ್ಮಿರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನಾ ಜಮಾವಣೆ ಅಧಿಕಗೊಳಿಸಿದೆ. ಅಲ್ಲಿನ ಗಡಿ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಸೀಮಿತ ದಾಳಿ ಬಳಿಕ ಭಾರತ ಸಹ ಮುಂಜಾಗ್ರತಾ ಕ್ರಮವಾಗಿ ಪಾಕ್ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಜತೆಗೆ ಗಡಿಯಲ್ಲಿ ಹೆಚ್ಚುವರಿ ಸೇನೆಯನ್ನು ಜಮಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆ ಕೂಡ ಇದೇ ಹಾದಿ ತುಳಿದಿದೆ. ಭಾರತ ಉಗ್ರರ ವಿರುದ್ಧ ಮತ್ತೊಂದು ಸೀಮಿತ ದಾಳಿ ನಡೆಸಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪಾಕಿಸ್ತಾನ ಗಡಿಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸುತ್ತಿರಬಹುದು ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಸೀಮಿತ ದಾಳಿಗೆ ಪಾಕಿಸ್ತಾನ ಪ್ರತಿಕಾರ ತಿರಿಸಿಕೊಳ್ಳಲು ಪಾಕ್ ಯೋಜನೆ ರೂಪಿಸುತ್ತಿದೆ. ಆದರೆ, ಸೇನೆಯನ್ನು ಬಳಸಿ ಭಾರತದ ಮೇಲೆ ಯುದ್ಧ ಮಾಡುವುದಕ್ಕಿಂತಲೂ ಉಗ್ರರ ಮೂಲಕ ಭಾರತದ ಮೇಲೆ ದಾಳಿ ಮಾಡುವ ತಂತ್ರವನ್ನು ಪಾಕ್ ಅನುಸರಿಸುವ ಸಾಧ್ಯತೆಯಿದೆ. ಹಾಗಾಗಿ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿ ಹೆಚ್ಚಿನ ಉಗ್ರರಿಗೆ ಗಡಿ ದಾಟಿ ಭಾರತದೊಳಗೆ ನುಸುಳಲು ನೆರವು ನೀಡಲು ಮುಂದಾಗಬಹುದು. ಮುಂದಿನ ದಿನಗಳಲ್ಲಿ ಒಳನುಸುಳುವಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ಜತೆಯಲ್ಲೆ ಪಾಕಿಸ್ತಾನ ಗಡಿ ಭಾಗದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳನ್ನು ತಮ್ಮ ಸೇನಾ ನೆಲೆಗಳ ಸನಿಹಕ್ಕೆ ಸ್ಥಳಾಂತರಿಸುತ್ತಿದೆ. ಆ ಮೂಲಕ ಮತ್ತೊಂದು ಸೀಮಿತ ದಾಳಿಯನ್ನು ತಡೆಯಲು ಪಾಕ್ ಸಂಚು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
100 ಕ್ಕೂ ಹೆಚ್ಚು ಉಗ್ರರು ಪಿಒಕೆಯಲ್ಲಿ ಭಾರತದ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ಒಳನುಸುಳಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೊದಿಗೆ ಅವರಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ರಾಜಸ್ಥಾನದ ಬರ್ಮೇರ್ ಜಿಲ್ಲೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
↧
ಗಡಿಯಲ್ಲಿ ಪಾಕ್ ಸೇನಾ ಬಲ ಹೆಚ್ಚಳ
↧