ಶ್ರೀನಗರ: ಕಾಶ್ಮೀರದ ಉರಿ ಪಟ್ಟಣದಲ್ಲಿರುವ ಸೇನಾ ಶಿಬಿರದ ಮೇಲೆ ಭಾನುವಾರ ಮುಂಜಾನೆ ಉಗ್ರರು ನಡೆಸಿದ ಆಕ್ರಮಣದಲ್ಲಿ 17 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಕಳ್ಳದಾರಿಯ ಮೂಲಕ ಬಂದು ದುರಾಕ್ರಮಣ ಮಾಡಿದ ನಾಲ್ವರು ಉಗ್ರರನ್ನು ಸೇನೆ ಪ್ರತಿ ದಾಳಿಯಲ್ಲಿ ಬಲಿ ಪಡೆದಿದೆ. ಈ ಕೃತ್ಯ ಪಾಕಿಸ್ತಾನ ಪ್ರೇರಿತ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಪಾಕಿಸ್ತಾನ ಮೂಲದ ಜೈಶೆ ಮೊಹಮ್ಮದ್ ಸಂಘಟನೆ ರೂವಾರಿ ಎನ್ನಲಾಗಿದ್ದು, ಬಳಸಿದ ಶಸ್ತ್ರಾಸ್ತ್ರಗಳು ಪಾಕ್‌ನಲ್ಲಿ ನಿರ್ಮಿಸಲ್ಪಟ್ಟವು. ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನೆಯ ಪ್ರಧಾನ ನೆಲೆಯಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿರುವ ಬೆಟಾಲಿಯನ್ ಪ್ರಧಾನ ಕಚೇರಿ ಮೇಲೆ ಬೆಳಗ್ಗೆ 5.30ರ ಹೊತ್ತಿಗೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದಾರೆ. ಗ್ರನೇಡ್‌ಗಳನ್ನು ಎಸೆಯುತ್ತಾ, ಗುಂಡಿನ ಮಳೆಗರೆಯುತ್ತಾ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ಸ್ಫೋಟದಿಂದ ದೋಗ್ರಾ ರೆಜಿಮೆಂಟ್‌ನ ಯೋಧರು ಮಲಗಿದ್ದ ಟೆಂಟ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಧರ ಸಾವಿಗೆ ಕಾರಣವಾಯಿತು. ಬೆಂಕಿ ಹಲವು ಬ್ಯಾರಕ್‌ಗಳಿಗೆ ಹರಡಿದ್ದು ಘಟನೆಯಲ್ಲಿ 19 ಯೋಧರು ಗಾಯಗೊಂಡಿದ್ದಾರೆ. ಗಡಿ ಭದ್ರತಾ ಕಾರ್ಯಾಚರಣೆಯ ಪಾಳಿ ಬದಲಾವಣೆ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಇತ್ತೀಚಿನ ವರ್ಷಗಳಲ್ಲೇ ಸೇನೆಯ ಮೇಲೆ ನಡೆದ ಅತ್ಯಂತ ಭಯಾನಕ ಉಗ್ರ ದಾಳಿ ಎಂದು ಹೇಳಲಾದ ಆಕ್ರಮಣ ನಡೆದು 3 ಗಂಟೆಗಳ ಕಾಲ ಗುಂಡಿನ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರು ಉಗ್ರರನ್ನು ಸದೆಬಡಿದರು. ಮತ್ತು ಗಾಯಾಳುಗಳನ್ನು ಬಾರಾಮುಲ್ಲಾದಲ್ಲಿರುವ ಸೇನೆಯ 19ನೇ ವಿಭಾಗೀಯ ಮುಖ್ಯ ಕಚೇರಿಯ ಹೆಲಿಕಾಪ್ಟರ್‌ಗಳ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಜೈಶ್ ಉಗ್ರರ ಕೃತ್ಯ?: ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಈ ಕೃತ್ಯ ನಡೆಸಿರುವ ಶಂಕೆ ಇದ್ದು, ಅವರು ಬಳಸಿದ ಆಯುಧಗಳಲ್ಲಿ ಪಾಕಿಸ್ತಾನದ ಮೊಹರುಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಉಗ್ರರು ಸಲಾಮಾಬಾದ್ ನಲ್ಲಾಹ್ ಗಡಿ ಮೂಲಕ ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ. ಒಂದು ತಂಡದಲ್ಲಿದ್ದ ನಾಲ್ವರನ್ನು ಸೇನೆ ಬಲಿ ಪಡೆದಿದ್ದು, ನುಗ್ಗಿರಬಹುದಾದ ಇನ್ನಷ್ಟು ಉಗ್ರರ ಬೇಟೆಗಾಗಿ ಗುಡ್ಡಗಾಡು ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಸಚಿವ ಮನೋಹರ ಪರಿಕರ್ ಮತ್ತು ಭೂಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ತಕ್ಷಣವೇ ಉರಿಗೆ ಧಾವಿಸಿದ್ದಾರೆ ಮತ್ತು ಉಗ್ರರ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡುವುದಾಗಿ ಘೋಷಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯ ಅವಲೋಕನಕ್ಕೆ ತುರ್ತು ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಸಿಂಗ್ ಮೋದಿ ಅವರು ಹೇಡಿಗಳ ದುರಾಕ್ರಮಣವನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ದೇಶಕ್ಕೆ ಭರವಸೆ ನೀಡಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ಇಡೀ ದೇಶ ಉಗ್ರರ ಪಾತಕ ಕೃತ್ಯವನ್ನು ಖಂಡಿಸಿದೆ. ಜಗತ್ತಿನೆಲ್ಲೆಡೆಯಿಂದ ಖಂಡನೆ ಹರಿದುಬಂದಿದೆ. ಮೂರು ಗಂಟೆಗಳ ಸಮರ ಉಗ್ರರು ಸೇನಾ ಶಿಬಿರಕ್ಕೆ ಬೆಳಗ್ಗೆ 5.30ಕ್ಕೆ ದಾಳಿ ನಡೆಸಿದ್ದು, ಬೆಳಗ್ಗೆ 8.30ರವರೆಗೆ ಸೇನೆ ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. 14 ಮಂದಿ ಯೋಧರು ಬೆಂಕಿಗೆ ಆಹುತಿಯಾದರು, ಮೂವರು ಗುಂಡಿನ ಚಕಮಕಿಯಲ್ಲಿ ಬಲಿದಾನ ಮಾಡಿದರು. ಈ ನಡುವೆ, ನಾಲ್ವರು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಯಿತು.
↧
ಹೇಡಿ ಪಾಕ್‌ನಿಂದ ಉರಿ ದಾಳಿ: 17 ಭಾರತೀಯ ಯೋಧರು ಹುತಾತ್ಮ
↧