ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು-ಬಕರ್ ಅಲ್ ಬಾಗ್ದಾದಿಯ ಪ್ರಮುಖ ಗೆಳೆಯ ಶಫಿ ಅಲಿಯಾಸ್ ಯೂಸುಫ್, ಭಾರತೀಯರನ್ನು ಐಸಿಸ್‌ಗೆ ಸೇರಿಸುವಲ್ಲಿ ಕಾರ್ಯಪ್ರವೃತ್ತನಾಗಿದ್ದ. ಇದುವರೆಗೂ ಕನಿಷ್ಠ 30 ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ, ಎನ್ನಲಾಗಿದೆ.
ಕಳೆದ ವರ್ಷ ಐಸಿಸ್ ಸೇರಲು ಹೋದ ಭಾರತದ 23 ಯುವಕರನ್ನು ಬಂಧಿಸಿದ್ದ ಎನ್‌ಐಎ ಹಾಗೂ ಸಂಬಂಧಿಸಿದ ಪೊಲೀಸರ ಪ್ರಕಾರ, ದೇಶದ ಪ್ರತಿ ರಾಜ್ಯದಲ್ಲೂ ಐಸಿಸ್ ಘಟಕ ತೆರೆಯುವ ಯೋಜನೆ ಶಫಿಗಿತ್ತು. ಇದೀಗ ಶಫಿಯ ಸಾವು, ಐಸಿಸ್‌ನ ಭಾರತೀಯ ಘಟಕವನ್ನು ಅತಂತ್ರವಾಗಿಸಿದೆ.
ಉಗ್ರ ಸೋದರರ ಅಧ್ಯಾಯ ಅಂತ್ಯ
ಶಫಿ ಐಸಿಸ್‌ನ ಭಾರತೀಯ ಘಟಕದ ಚುಕ್ಕಾಣಿ ಹಿಡಿವ ಮೊದಲು ಆ ಸ್ಥಾನದಲ್ಲಿದ್ದುದು ಆತನ ಸ್ವಂತ ಅಣ್ಣ ಸುಲ್ತಾನ್ ಅರ್ಮರ್. ಕಳೆದ ವರ್ಷದ ಮಾರ್ಚ್‌ನಲ್ಲಿ ತಮ್ಮನ ಮಾದರಿಯಲ್ಲೇ ಸುಲ್ತಾನ್ ಸಾವಿಗೀಡಾಗಿದ್ದ. ಅಲ್ಲಿಗೆ ಭಟ್ಕಳದ ಉಗ್ರ ಸೋದರರ ಅಧ್ಯಾಯ ಅಂತ್ಯ ಕಂಡಿದೆ.
ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ಸಿರಿಯಾದ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್‌ನ ಭಾರತೀಯ ಘಟಕದ ಮುಖ್ಯಸ್ಥ, ಭಟ್ಕಳದ ಮೊಹಮ್ಮದ್ ಶಫಿ ಅರ್ಮರ್ ಸಾವಿಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.