Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಹಾಫ್‌ ಮೆಂಟ್ಲು: ನೋಡಿದವರಿಗೆ ಹಾಫ್‌ ಮೆಂಟ್ಲು

$
0
0

ಕನ್ನಡ ಚಿತ್ರ
* ಪದ್ಮಾ ಶಿವಮೊಗ್ಗ

ಈಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್‌ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್‌ ಚೊಚ್ಚಲ ನಿರ್ದೇಶನದ ಚಿತ್ರ ಹಾಫ್‌ ಮೆಂಟ್ಲು ರಿಲೀಸ್‌ ಆಗಿದೆ. ಈ ನಿರ್ದೇಶಕರು ಯಾವ ಸಾಲಿಗೆ ಸೇರುತ್ತಾರೋ ಅನ್ನುವುದನ್ನು ಚಿತ್ರ ನೋಡಿಯೇ ತಿಳಿಯುವುದು ಉತ್ತಮ.

ಕನ್ನಡ ಚಿತ್ರಗಳಲ್ಲಿ ಹುಚ್ಚನ ಪಾತ್ರಕ್ಕೆ ಇಲ್ಲಿಯವರೆಗೂ ನ್ಯಾಯ ಸಿಕ್ಕಿರಲಿಲ್ಲ. ಈ ಚಿತ್ರದಲ್ಲಿ ಸಿಕ್ಕಿದೆ ಎಂದು ಹೇಳಬಹುದು.

ಸಂದೀಪ್‌ ಗೌಡ ಮತ್ತು ಸೋನು ಗೌಡ ನಾಯಕ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಕತೆ ಏನು ಎನ್ನುವುದನ್ನು ಚಿತ್ರದ ಹೆಸರೇ ಹೇಳಿಬಿಡುತ್ತದೆ. ನಾಯಕ ಅರೆ ಹುಚ್ಚನೋ, ಬುದ್ಧಿಮಾಂದ್ಯನೋ ಎಂಬ ಅನುಮಾನಗಳನ್ನು ಇಟ್ಟುಕೊಂಡೇ ಸಿನಿಮಾ ನೋಡಬೇಕಾಗುತ್ತದೆ. ನಾಯಕನಿಗೆ ಎಲ್ಲರಂತೆ ಸಹಜವಾಗಿ ಯೋಚಿಸುವ ಶಕ್ತಿ ಇಲ್ಲ. ತಿಳಿವಳಿಕೆಯೂ ಕಮ್ಮಿ. ಕೆಲ ಸಂದರ್ಭಗಳಲ್ಲಿ ಮಗುವಿನಂತೆ ಯೋಚಿಸುತ್ತಾನೆ. ತಾಯಿಯನ್ನು ಅನಾಥ ಆಶ್ರಮದಲ್ಲಿ ಬಿಟ್ಟು ತಾನು ಒಂಟಿಯಾಗಿದ್ದುಬಿಡುವ ಇವನಿಗೆ ಸುಂದರ ಹುಡುಗಿ ಮಧು ಎಂಬುವವಳ ಜತೆ ಲವ್‌ ಆಗುತ್ತದೆ! ಕೈ ಮೇಲೆ ಅವಳ ಹೆಸರನ್ನೇ ಟ್ಯಾಟೋ ಹಾಕಿಸಿಕೊಂಡು ಅವಳನ್ನು ಕಾಪಾಡುತ್ತಾನೆ. ಕೆಟ್ಟ ದೃಷ್ಟಿಯಲ್ಲಿ ಅವಳನ್ನು ನೋಡುವವರನ್ನು ತದುಕುತ್ತಾನೆ.

ಕತೆ ಇನ್ನೂ ಇದೆ. ಸುಶಿಕ್ಷಿತ ಮನೆತನದ ಅವಳು ಪಿಟೀಲು ನುಡಿಸುವುದನ್ನು ಕಲಿಯುತ್ತಿರುತ್ತಾಳೆ. ಇವನು ಪೆದ್ದು ಪೆದ್ದಾಗಿ ಪ್ರೀತಿಸುವುದಾಗಿ ಪೀಡಿಸಿ ಅವಳಿಂದ ಕೆನ್ನೆಗೆ ಪೆಟ್ಟು ತಿನ್ನುತ್ತಾನೆ. ಇಷ್ಟಾದರೂ ಕೂತಲ್ಲಿ ನಿಂತಲ್ಲಿ ಅವಳ ಧ್ಯಾನ ಮಾಡುತ್ತಾನೆ. ಮಧುವಿನ ಫೋಟೋ ಇಟ್ಟುಕೊಂಡು ಲವ್‌ ಮುಂದುವರಿಸುತ್ತಾನೆ. ಇವನ ಪ್ರೇಮಕ್ಕೆ ಅವಳು ರೋಸಿಹೋಗುತ್ತಾಳೆ. ಕ್ರಮೇಣ ಈ ಪ್ರೀತಿ ಅವಳಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ.

ಇದಾದ ಮೇಲೊಂದು ಟ್ವಿಸ್ಟ್‌ ಇದೆ. ಪೋಲಿಗಳ ಗುಂಪು ಅವಳನ್ನು ಕಿಡ್ನಾಪ್‌ ಮಾಡುತ್ತೆ. ಅಲ್ಲಿಗೆ ಬರುವ ನಾಯಕನಿಗೆ ಪೋಲಿಗಳು ಒಂದು ಚಾಲೆಂಜ್‌ ಹಾಕುತ್ತಾರೆ. ಆ ಚಾಲೆಂಜ್‌ ಏನು? ಅದನ್ನು ನಾಯಕ ಸ್ವೀಕರಿಸುತ್ತಾನಾ? ಇಲ್ಲವಾ? ಅದನ್ನು ನೀವು ತೆರೆಯ ಮೇಲೆ ನೋಡಬೇಕು.

ಗಟ್ಟಿ ಕತೆ ಇಲ್ಲ. ಯಾವ ಪಾತ್ರ ಪೋಷಣೆಯೂ ಸರಿ ಇಲ್ಲ. ಸೋನುಗೌಡ, ತಬಲಾ ನಾಣಿ ನಟನೆ ಪರವಾಗಿಲ್ಲ. ತಬಲಾ ನಾಣಿ ಮಾಡುವ ಚೂರುಪಾರು ಕಾಮಿಡಿ ಇಷ್ಟವಾಗಬಹುದು. ಬಿಟ್ಟರೆ ಚಿತ್ರದಲ್ಲಿ ಮಂಗಳಮುಖಿಯರು ಹಾಡಿರುವ ಹಾಡು ಚಿತ್ರ ಏಕೈಕ ಸ್ಪೆಷಲ್‌. ನಾಯಕ ಸಂದೀಪ್‌ಗೌಡ ಪಾತ್ರಕ್ಕೆ ಒಗ್ಗಿಲ್ಲ. ಕ್ಯಾಮೆರಾ ಕೆಲಸ ಕೆಲವೆಡೆ ಚೆನ್ನಾಗಿದೆ. ಸಂಗೀತ ಸುಮಾರು. ಅಷ್ಟು ಬಿಟ್ಟರೆ ಈ ಚಿತ್ರದ ಬಗ್ಗೆ ಹೇಳುವಂತದ್ದು ಏನೂ ಇಲ್ಲ. ನೋಡುವುದು ಬಿಡುವುದು ನಿಮ್ಮ ಆಯ್ಕೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>