- ಪದ್ಮಾ ಶಿವಮೊಗ್ಗ
ನವೀನ್ ಕೃಷ್ಣ ಅಭಿನಯದ ಹಗ್ಗದ ಕೊನೆ ಚಿತ್ರ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್. ನಂತರದ ಚಿತ್ರ 'ಆ್ಯಕ್ಟರ್' ಕೂಡಾ ಪ್ರಯೋಗಾತ್ಮಕ ಚಿತ್ರವೇ. ಹೆಸರೇ ಹೇಳುವಂತೆ ಸೋತ ನಟನೊಬ್ಬನ ಮನದ ತಾಕಲಾಟ, ನೋವನ್ನು ಹೇಳುವ ಸಿನಿಮಾ. ಬಹಳ ನಟರು ಜೀವನದಲ್ಲಿ ಎದುರಿಸುವ ಪರಿಸ್ಥಿತಿ ಇದು. ಹಗ್ಗದ ಕೊನೆಯಲ್ಲಿ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿದ್ದ ನಿರ್ದೇಶಕ ಆ್ಯಕ್ಟರ್ ಚಿತ್ರದಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. ಬಾಳುವಂಥ ಹೂ ಬಾಡಬಾರದು ಎಂಬುದನ್ನು ಹೇಳಿದ್ದಾರೆ.
ಕಲಾವಿದ ಸಂಜಯ್ (ನವೀನ್ ಕೃಷ್ಣ) ಮೂರು ವರ್ಷಗಳಲ್ಲಿ ಹಿಟ್ ಚಿತ್ರಗಳನ್ನು ನೀಡಿದ ನಟ. ನಂತರ ಅವರಿಗೆ ಸೋಲು ಎದುರಾಗುತ್ತದೆ. ಬೇಡಿಕೆ ನಟನಾಗಿದ್ದಾಗ 'ಹೌಸ್‌ಫುಲ್' ಆಗಿದ್ದ ಮನೆ ನಂತರ ಖಾಲಿ. ಸಂಜಯ್ ಏಕಾಂಗಿ. ಒಳ್ಳೆಯ ಅವಕಾಶಕ್ಕಾಗಿ ಕಾದು ಕುಳಿತವನಿಗೆ ಸೋಂಬೇರಿ ಪಟ್ಟ. ನಟನೆಯೇ ಬದುಕು ಎಂದು ನಂಬಿದವನಿಗೆ ಖಿನ್ನತೆ ಆವರಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನಿಸುತ್ತದೆ. ಹಾಗೆ ನೋಡಿದರೆ ಇವನು ನೋವಲ್ಲೂ ನಗಿಸುವ, ಜೀವನವನ್ನು ಪ್ರೀತಿಸುವಂತೆ ಮಾಡುವ ಚಾರ್ಲಿ ಚಾಂಪ್ಲಿನ್ ಅಭಿಮಾನಿ. ಸಂಜಯ್‌ನನ್ನು ಪ್ರೀತಿಸುವವರು ಮೂವರು, ಅವರು ಅಮ್ಮ, ನಟಿ, ಕೆಲಸದ ಹೆಂಗಸು. ಮೂವರಲ್ಲಿ ಒಬ್ಬರು ದ್ವಿತಿಯಾರ್ಧದಲ್ಲಿ ಎಂಟ್ರಿ ತೆಗೆದುಕೊಳ್ಳುತ್ತಾರೆ. ಕೊನೆಗೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ? ಇಲ್ಲವಾ? ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಇದು ಕಮರ್ಷಿಯಲ್ ಚಿತ್ರ ಅಲ್ಲ. ಮನರಂಜನೆ ನಿರೀಕ್ಷಿಸದೆ ನೋಡಬಹುದಾದ ಸಿನಿಮಾ.
ಒಂದೇ ಮನೆಯಲ್ಲಿ ಶೂಟ್ ಮಾಡಿರುವ ಇಬ್ಬರು ಕಲಾವಿದರು ಮಾತ್ರ ನಟಿಸಿರುವ ಎರಡು ಗಂಟೆಗಳ ಚಿತ್ರ ಅನ್ನೋದು ವಿಶೇಷ. ನಿರ್ದೇಶಕರು ಕಲಾವಿದನ ಬಗ್ಗೆ ಹೇಳುತ್ತಾ, ಚಿತ್ರದ ಕೊನೆಯಲ್ಲಿ ಜೀವನದಲ್ಲಿ ಸೋಲನುಭವಿಸಿ ಅಂತ್ಯ ಹಾಡಬಯಸುವ ಎಲ್ಲರನ್ನೂ ಕತೆಯ ವ್ಯಾಪ್ತಿಯೊಳಗೆ ತರುತ್ತಾರೆ. ಚಿತ್ರದಲ್ಲಿ ಕುತೂಹಲ ಹುಟ್ಟುವುದೇ ಧ್ವಿತಿಯಾರ್ಧದಲ್ಲಿ. ಆದರೆ, ಅದು ಹೆಚ್ಚು ಕಾಲ ಉಳಿಯುವುದಿಲ್ಲ.
ನಿರ್ದೇಶಕ ಕತೆಯ ಆಯ್ಕೆಯಲ್ಲಿ ತೋರಿದ ಜಾಣ್ಮೆ ದೃಶ್ಯಗಳಲ್ಲಿ ಕಾಣುವುದಿಲ್ಲ. ಕಥಾವಸ್ತುವಿಗೆ ಹೊಂದಾಣಿಕೆಯಾಗದ ಹಿನ್ನೆಲೆ ಸಂಗೀತ ಕಿವಿಗೆ ಅಬ್ಬರಿಸುತ್ತದೆ. ಚಿತ್ರದ ಟೆಕ್ನಿಕಲ್ ಎರರ್ ನೋಡಿದಾಗ ಆತುರದಿಂದ ಸಿನಿಮಾ ಮಾಡಿದಂತೆನಿಸುತ್ತದೆ. ನಟನ ನೋವು ಪ್ರೇಕ್ಷಕನ ಹೃದಯ ತಟ್ಟುವುದಿಲ್ಲ. ನವೀನ್ ಕೃಷ್ಣ ನಟನೆ ಗಮನ ಸೆಳೆಯುತ್ತದೆ. ಅವರೇ ಬರೆದಿರುವ ಮಾತುಗಳಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಹಾಡುಗಳು ಚೆನ್ನಾಗಿವೆ. ಭವ್ಯವಾದ ಮನೆಯೊಂದರಲ್ಲೇ ವೈವಿಧ್ಯಮಯವಾಗಿ ಚಿತ್ರೀಕರಿಸಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿದ ದಯಾಳ್ ಪದ್ಮನಾಭನ್ ಈ ಸಾಹಸವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ವಿಭಿನ್ನ ನಿರೂಪಣೆಯಿಂದ ಚಿತ್ರ ಗೆಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಚಿತ್ರ: ಆಕ್ಟರ್ (ಕನ್ನಡ)