ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಪ್ಪು' ಚಿತ್ರವನ್ನು ನಿರ್ದೇಶಿಸಿದ್ದ ಪೂರಿ ಜಗನ್ನಾಥ್, 14 ವರ್ಷಗಳ ಬಳಿಕ 'ರೋಗ್' ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್ ಅಂಗಳವನ್ನು ಪ್ರವೇಶಿಸಿದ್ದಾರೆ. ಚಿತ್ರದ ಟ್ರೇಲರ್ ನೋಡ್ತಿದ್ರೆ ಇದೊಂದು ಪಕ್ಕಾ ಯುತ್‌ಫುಲ್ ಎಂಟರೇಟನರ್ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಬಾಲಿವುಡ್ ಚಿತ್ರಗಳಿಗೆ ಪೈಪೋಟಿ ನೀಡುವಂತೆ 'ರೋಗ್' ನಿರ್ಮಾಣವಾಗಿದ್ದು, ಸಿನಿ ರಸಿಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಅಂದ್ಹಾಗೆ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ತನ್ವಿ ಫಿಲಂಸ್ ಲಾಂಛನದಲ್ಲಿ ನಿರ್ಮಾಪಕ ಸಿ. ಆರ್ ಮನೋಹರ್ 'ರೋಗ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಹೋದರ ಇಶಾನ್ ಅವರನ್ನ ನಾಯಕನಟನಾಗಿ ದಕ್ಷಿಣ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮನ್ನಾರಾ ಚೋಪ್ರಾ ಮತ್ತು ಎಂಜೆಲಾ ಈ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಅವಿನಾಶ್ ಮತ್ತು ಸಾಧು ಕೋಕಿಲ ಕನ್ನಡದ 'ರೋಗ್'ನಲ್ಲಿ ಅಭಿನಯಿಸಿದ್ದಾರೆ.
ಕಲರ್‌ಫುಲ್ ಅಂಶಗಳಿಂದ ಯುವ ಮನಸ್ಸುಗಳನ್ನು ಸೆಳೆಯುತ್ತಿರುವ ಈ ಚಿತ್ರ, ಖಡಕ್ ಹುಡುಗನ ಪ್ರೇಮ ಕಥೆ ಎಂಬ ಅಡಿಬರಹ ಹೊಂದಿದೆ. ಸಖತ್ತಾಗಿ ಮೂಡಿಬಂದಿರೋ 'ರೋಗ್' ಟ್ರೇಲರ್‌ನ್ನ ನೀವೂ ನೋಡಿ.
ಸ್ಯಾಂಡಲ್‌ವುಡ್ ಅಂಗಳದಲ್ಲಿ ಸದ್ಯಕ್ಕೆ 'ರೋಗ್'ನದ್ದೇ ಮಾತು. ಮೊದಲು ಫಸ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಈ ಚಿತ್ರ, ಈಗ ಟ್ರೇಲರ್ ಮೂಲಕ ಭಾರಿ ಸದ್ದು ಮಾಡುತ್ತಿದೆ.