Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಗೆದ್ದ ಗಯ್ಯಾಳಿಗಳು

$
0
0

ಚಿತ್ರ: ಕಿರಗೂರಿನ ಗಯ್ಯಾಳಿಗಳು (ಕನ್ನಡ)

* ಪದ್ಮಾ ಶಿವಮೊಗ್ಗ
ಭೂಗತ ಜಗತ್ತಿನ ಅಂತರಾಳವನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಿ ಸುಮನಾ ಕಿತ್ತೂರು, ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿ ಉತ್ತಮ ಪ್ರಯತ್ನ ಮಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಬರೆದಿರುವ ಕಿರಗೂರಿನ ಗಯ್ಯಾಳಿಗಳು ಕೃತಿ ಸಿನಿಮಾ ಮಾಡುವುದು ಸವಾಲಿನ ಸಂಗತಿ. ಕಾದಂಬರಿ ಓದಿದವರಿಗೆ ಅದರಷ್ಟು ರಸವತ್ತಾಗಿ ಸಿನಿಮಾ ಇಲ್ಲ ಅನ್ನಿಸಿದರೂ, ತೇಜಸ್ವಿಯವರೇ ಹೇಳಿರುವಂತೆ ಕಾದಂಬರಿ ಬೇರೆ ಸಿನಿಮಾ ಬೇರೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಚಿತ್ರ ನೋಡಿದರೆ ಸುಮನಾ ವಿಭಿನ್ನವಾದ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ.

ಕಿರಗೂರು ಎಂಬ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಅಸಾಮಾನ್ಯರು. ಬಾಯಿ ತೆರೆದರೆ ಸಾಕು ಡ್ಯಾಶ್ ಡ್ಯಾಶ್ ಡೈಲಾಗ್‌ಗಳು ಉದುರುತ್ತವೆ. ಹೆಣ್ಣು ಎಂಬ ನಯ ನಾಜೂಕಿನ ಸೋಂಕೂ ಇಲ್ಲದ ಜನ್ಮ ಜಾಲಾಡುವ ಜಗಳಗಂಟಿಯರು. ತಪ್ಪು ಮಾಡಿದ ಯಾವ ಗಂಡಸನ್ನೂ ಬಿಡದ ಗಟ್ಟಿಗಿತ್ತಿಯರು. ಇವರಿಗೆ ಲೀಡರ್ ತರ ಇರೋಳು ದಾನಮ್ಮ (ಶ್ವೇತಾ ಪಂಡಿತ್). ಇವರ ಹತ್ತಿರ ಪೊಲೀಸರ ಆಟ, ಮಂತ್ರವಾದಿ ಕಾಟ ಯಾವುದೂ ನಡೆಯಂಗಿಲ್ಲ. ಸುತ್ತಲ ಹಳ್ಳಿಗರೆಲ್ಲಾ ಕಿರಗೂರಿನ ಹೆಂಗಸರ ಬಾಯಿಗೆ ಹೆದರುವವರೇ. ಸೋಮಾರಿ ಒಕ್ಕಲಿಗರು ಮತ್ತು ಇವರ ಕೆಲಸಗಳನ್ನು ಮಾಡಿಕೊಡುವ ಹರಿಜನರು, ಜಾತಿಬೇಧವಿಲ್ಲದೆ ಪ್ರೀತಿಯಿಂದ ಇರುವ ಹಳ್ಳಿ ಅದು. ಗ್ರಾಮ ಸೇವಕ ಶಂಕ್ರಪ್ಪ (ಅಚ್ಯುತ್ ಕುಮಾರ್) ಮತ್ತು ಮಂತ್ರವಾದಿ ಹೆಗಡೆ (ಶರತ್ ಲೋಹಿತಾಶ್ವ) ತಮ್ಮ ಸ್ವಾರ್ಥಕ್ಕಾಗಿ ಎರಡೂ ಜಾತಿಗಳ ನಡುವೆ ತಂದಿಡುತ್ತಾರೆ. ಒಂದು ಮನೆಯವರಂತೆ ಇದ್ದ ಹಳ್ಳಿಗರ ಮನದೊಳಗೆ ದ್ವೇಷದ ಬೀಜ ಬಿತ್ತುತ್ತಾರೆ. ಇದರ ಪರಿಣಾಮ ಹಳ್ಳಿ ಗಂಡಸರು ಜೈಲಿನಲ್ಲಿ ಒದೆ ತಿನ್ನಬೇಕಾಗುತ್ತದೆ. ಸೊಂಟ ಉಳುಕಿಸಿಕೊಂಡ ಗಂಡಸರು, ಉಳುಕು ತೆಗೆಯುವ ಹರಿಜನ ಕರಿಯ (ಸಂಪತ್)ನನ್ನು ದಲಿತ ಎನ್ನುವ ಕಾರಣಕ್ಕೆ ದೂರ ಇಡುವುದು, ಕಾಳೇಗೌಡ (ಕಿಶೋರ್) ಮತ್ತು ನಾಗಮ್ಮ (ಸೋನು ಗೌಡ)ರಿಗೆ ಮಕ್ಕಳಾಗದಿರುವುದು, ಉಳುಕು ತೆಗೆಯಲು ಬಂದ ನಾಡಿ ವೈದ್ಯ ನಾಗಮ್ಮನನ್ನು ಮರಳು ಮಾಡಿ ಮನೆಯನ್ನು ದೋಚಿ ಓಡಿಹೋಗುವುದು, ಹೀಗೆ ಹಲವು ಘಟನೆಗಳನ್ನು, ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳ ಕತೆಯನ್ನು ಹೆಣೆದು ಒಂದು ಕತೆಯಾಗಿಸಲಾಗಿದೆ. ಕಿರಗೂರಿನ ಗಯ್ಯಾಳಿಗಳು ಎಲ್ಲರಿಗೂ ಬಡಿದು ಸಾರಾಯಿ ಅಂಗಡಿಯನ್ನು ಸುಡುತ್ತಾರೆ.

ಚಿತ್ರದಲ್ಲಿ ಹಳ್ಳಿಯ ಪರಿಸರವನ್ನು ಸಹಜವಾಗಿ ಮೂಡಿಸುವಲ್ಲಿ ಇನ್ನಷ್ಟು ಪರಿಶ್ರಮ ಬೇಕಿತ್ತು ಅನ್ನಿಸುತ್ತದೆ. ಪ್ರಾಪರ್ಟಿಗಳು ಮತ್ತು ನಟರಿಗೆ ಮಾಡಿರುವ ಮೇಕಪ್ ಮೈನಸ್ ಪಾಯಿಂಟ್. ಉಳಿದಂತೆ ಮನರಂಜನೆಗೆ ನೋಡಬೇಕೆನ್ನುವ ಪ್ರೇಕ್ಷಕರನ್ನು ಕಿರಗೂರಿನ ಗಯ್ಯಾಳಿಗಳು ನಿರಾಶೆ ಮಾಡುವುದಿಲ್ಲ. ದಾನಮ್ಮನ ಪಾತ್ರದಲ್ಲಿ ಗಯ್ಯಾಳಿ ಕಾಣಿಸದೆ ಸಪ್ಪೆ ಎನಿಸುತ್ತಾರೆ. ಸುಕೃತಾ ವಾಗ್ಲೆ ನಟನೆಯಲ್ಲಿ ಗಯ್ಯಾಳಿತನ ಕಾಣುತ್ತದೆ. ಚಿಕ್ಕ ಪಾತ್ರವಾದರೂ ತಹಸೀಲ್ದಾರ್ ಪ್ರಕಾಶ್‌ಬೆಳವಾಡಿ ಚೆನ್ನಾಗಿ ನಟಿಸಿದ್ದಾರೆ. ಸಂಪತ್, ಸುಂದರ್, ಅಚ್ಯುತ್ ನಟನೆ ಉತ್ತಮ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸುಮನಾ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ. ಪ್ರಯೋಜನಕ್ಕೆ ಬಾರದ ಗಂಡಸರು, ದಬ್ಬಾಳಿಕೆ, ಹೆಣ್ಣುಮಕ್ಕಳ ವಿವೇಚನೆ, ಗಟ್ಟಿತನ, ಹಳ್ಳಿಗೆ ಬಂದ ತಹಸೀಲ್ದಾರ್, ಪಂಚಾಯಿತಿ, ಮರ ಉರುಳುವ ಸನ್ನಿವೇಶ ಹೀಗೆ ಕೆಲವು ದೃಶ್ಯಗಳು, ಹಾಸ್ಯ ಸನ್ನಿವೇಶಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಆದರೆ, ಸೆನ್ಸಾರ್ ಮಂಡಳಿ ಬೈಗುಳಕ್ಕೆ ಅನಗತ್ಯ ಕತ್ತರಿ ಹಾಕಿರುವುದು ರಸಭಂಗವನ್ನುಂಟು ಮಾಡುತ್ತದೆ. ಯಾವುದೇ ಐಟಂ ಸಾಂಗ್, ಫೈಟ್ ಇಲ್ಲದ ಸಿನಿಮಾ ಕಿರಗೂರಿನ ಗಯ್ಯಾಳಿಗಳು ಪ್ರೇಕ್ಷಕನನ್ನು ರಂಜಿಸುತ್ತದೆ.


Viewing all articles
Browse latest Browse all 7056

Latest Images

Trending Articles

<script src="https://jsc.adskeeper.com/r/s/rssing.com.1596347.js" async> </script>